ತೆಲುಗು ಬಣಜಿಗರು -
 	ಕೋಲಾರ, ಬೆಂಗಳೂರು, ತುಮಕೂರು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಲೌಕಿಕ ವೃತ್ತಿಗಾಯಕರು. ದೊಂಬಿದಾಸರು ಹಾಗೂ ತೆಲಗು ಜಂಗಮರಂತೆ ಇವರು ಬಳಸುವ ವಾದ್ಯವೂ ಏಕತಾರಿ ಹಾಗೂ ಬಟ್ಟುತಾಳ.  ಇವರ ಮನೆ ಮಾತು ತೆಲುಗು. ಇವರ ಹಾಡುಗಳ ಭಾಷೆ ಕನ್ನಡ. ದೊಂಬಿದಾಸರು ಹಾಗೂ ತೆಲುಗು ಜಂಗಮರು (ನೋಡಿ- ತೆಲುಗು-ಜಂಗಮರು) ಹಾಡುವ ಗಂಗೇಗೌರಿ ಜಗಳ, ಸತ್ಯಭೋಜರಾಜ, ಬಾಲನಾಗಮ್ಮ, ಮಾಗಡಿಕೇಂಪೆಗೌಡ, ಅಣ್ಣ-ತಂಗಿ, ಬಂಜೆ ಹೊನ್ನಮ್ಮ, ಕಲಿಯುಗದ ಬಾಲೆ ಮುಂತಾದ ಕಾವ್ಯಗಳನ್ನು ಇವರೂ ಹಾಡುತ್ತಾರೆ. ತೆಲುಗು ಜಂಗಮರು, ತೆಲುಗು ಬಣಜಿಗರು, ದೊಂಬಿದಾಸರು-ಈ ಮೂರು ಕಾವ್ಯ ಸಂಪ್ರದಾಯಗಳಿಗೂ ಒಂದೇ ಮೂಲವಿರುವಂತೆ ಕಾಣುತ್ತದೆ. ವಿಜಯನಗರ ಪತನಾನಂತರ ತೆಲುಗು ಪ್ರದೇಶಗಳಿಂದ ಬೇರೆಬೇರೆ ಕಡೆಗೆ ಇವರು ಚದರಿಹೋದಂತೆ ಕಾಣುತ್ತದೆ. ಇವರೆಲ್ಲರೂ ಬಲಿಜ ಜನಾಂಗದ ಉಪಜಾತಿಗಳೆಂದು ತಿಳಿದುಬರುತ್ತದೆ.     

	ತೆಲುಗು ಭಾಷೆಯಾಡುವ ಬಣಜಿಗರು ತಮ್ಮನ್ನು ಬಲಜರು ಅಥವಾ ಬಲಿಜರು ಎಂದು ಹೇಳಿಕೊಳ್ಳುತ್ತಾರೆ. ಬಲಜ ಎಂದುಕೊಂಡಾಗ ತಾವು ಬಲರಾಮನ ಸಂತಾನವೆಂದೂ ಬಲಿಜ ಎಂದು ಕೊಂಡಾಗ ತಾವು ಬಲಿಚಕ್ರವರ್ತಿಯ ಸಂತಾನವೆಂದೂ ಶಿಷ್ಟಪುರಾಣಗಳ ಕಥೆಗಳಲ್ಲಿ ತಮ್ಮ ಕುಲದ ಮೂಲವನ್ನು ಗುರುತಿಸಿಕೊಳ್ಳಲು  ಪ್ರಯತ್ನಿಸುತ್ತಾರೆ.  ಬಲಿಜ ಎಂಬ ಶಬ್ದ ನಿಷ್ಪತ್ತಿಗಾಗಿಯೇ ಹುಟ್ಟಿಕೊಂಡಿರುವ  ಮತ್ತೊಂದು ಪುರಾಣ ಕಥೆಯೊಂದನ್ನು ದಿ ಮೈಸೂರ್ ಟ್ರೈಬ್ಸ್ ಅಂಡ್ ಕ್ಯಾಸ್ಟ್ಸ್ ಗ್ರಂಥದಲ್ಲಿ ಕೊಡಲಾಗಿದೆ. ಆ ಕಥೆಯ ಪ್ರಕರ ಬಲಿಜರು ಬಲಿ ಅಂದರೆ ಯಾಗದಿಂದ ಜನಿಸಿದವರು ಎಂದು ಹೇಳಲಾಗಿದೆ. ದಕ್ಷ ಪ್ರಜಾಪತಿಯ ಮಗಳಾದ ದಾಕ್ಷಾಯಿಣಿ ತನ್ನ ತಂದೆ ತನಗಾಗಿ ಮಾಡಿಸಿದ ಆಭರಣಗಳನ್ನು ಒಪ್ಪದೆ ತನ್ನ ಅಲಂಕಾರವನ್ನು ವಿಶೇಷವಾಗಿ ಹೆಚ್ಚಿಸುವ ಆಭರಣಗಳು ಬೇಕೆಂದು ಹಠ ಹಿಡಿದಳು. ಆಗ ದಕ್ಷನು ಬ್ರಹ್ಮನಲ್ಲಿ ತನ್ನ ಮಗಳ ಸಂತೃಪ್ತಿಗಾಗಿ ಸಲಹೆ ಕೇಳಿದ. ಅವಳ ಉದ್ದೇಶ ಈಡೇರಲು ಯಾಗವನ್ನು ಮಾಡಬೇಕೆಂದು ಬ್ರಹ್ಮ ಸೂಚಿಸಲಾಗಿ ಬ್ರಾಹ್ಮಣ ಪುರೋಹಿತನ ನೆರವಿನಿಂದ ದಾಕ್ಷಾಯಿಣಿ ಯಜ್ಞವನ್ನು ಕೈಗೊಂಡಳು. ಆಗ ಯಾಗದ ಅಗ್ನಿಜ್ವಾಲೆಗಳ ಮಧ್ಯೆ ವ್ಯಕ್ತಿಯೊಬ್ಬ ಅವಿರ್ಭವಿಸಿ, ಗಾಜಿನಬಳೆ,  ಓಲೆಗರಿ,  ಅರಿಸಿನ, ಕುಂಕುಮ, ಹೂವು, ಮುಂತಾದ ಮಂಗಳ ದ್ರವ್ಯಗಳನ್ನು ಹಿಡಿದು ಹೊರಬಂದ, ಆತ ತಂದ ವಸ್ತುಗಳಿಂದ ಅಲಂಕಾರ ಮಾಡಿಕೊಂಡ ದಾಕ್ಷಾಯಿಣಿ ಅಪಾರವಾದ ಆನಂದ ಹೊಂದಿ ಇತಃಪರ ಎಲ್ಲ ಸ್ತ್ರೀಯರೂ ಇವನ್ನು ಧರಿಸಬೇಕೆಂದೂ ಇವನ್ನು ಮಂಗಳದ್ರವ್ಯಗಳೆಂದೂ ಕರೆದಳು. ಈ ಮಗಳ ದ್ರವ್ಯಗಳನ್ನು ತಂದವನೇ ಬಲಿಜ. ಇವರು ತಮ್ಮನ್ನು ಗೌರೀಪುತ್ರರೆಂದೂ ಹೇಳಿಕೊಳ್ಳುತ್ತಾರೆ.     

	ಬಣಜಿಗರಲ್ಲಿ ಗಾಜುಲ ಬಣಜಿಗ, ಪೂವ್ವಲು ಬಣಜಿಗ, ಗಂಧುಡಿ ಬಣಜಿಗ, ಸುಖಮಂಜಿ ಬಣಜಿಗ, ದುಂದಿಬಣಜಿಗ, ದಾಸಬಣಜಿಗ, ಜೀಡಿಪಲ್ಲೆ  ಬಣಜಿಗ, ಎಲೆ ಬಣಜಿಗ ಮುಂತಾದ ಉಪಜಾತಿಗಳಿವೆ.  ಇವರೆಲ್ಲ ಗೌರಿಪುತ್ರರಂತೆ. ಆದರೆ ತೆಲುಗು ಬಣಜಿಗರು, ತೆಲುಗು ಜಂಗಮರು, ದೊಂಬಿದಾಸರುಗಳು ಗಂಗೆಪುತ್ರರಂತೆ. ಈ ಮೂವರೂ ಗಂಗೆಯನ್ನು ತಮ್ಮ ಕುಲದೇವತೆಯಾಗಿ ಆರಾಧಿಸುತ್ತಾರೆ. ಗಂಗೆ ಇವರಿಗೆ ಕುಲದೇವತೆಯಾದ ಬಗೆಯನ್ನು ಕುರಿತು ಗಾಯಕ ರಂಗಪ್ಪ ಒಂದು ಪುರಾಣ ಕಥೆಯನ್ನು ಹೇಳಿದ್ದಾನೆ; ಪಾರ್ವತಿಯ ಬಳಿ ಅಪೂರ್ವ ರತ್ನಾಭರಣಗಳಿದ್ದವು. ಒಮ್ಮೆ ಅವಳು ಸ್ನಾನಕ್ಕೆಂದು ತನ್ನ ಆಭರಣಗಳನ್ನು ಕಳೆದಿಟ್ಟು ಹೋದಾಗ ನಿರಾಭರಣೆಯಾದ ಗಂಗೆಗೆ ಈ ಆಭರಣಗಳನ್ನು ತೊಟ್ಟುಕೊಳ್ಳಬೇಕೆಂದು ಬಯಕೆಯಾಗಿ ಧರಿಸಿಕೊಂಡಳು. ಮಿಂದು ಮಡಿಯುಟ್ಟು ಬಂದ ಗೌರಿ ಗಂಗೆಯನ್ನು ಕಂಡು ಸಿಡುಕಿನಿಂದ ತನ್ನ ರತ್ನಾಭರಣಗಳನ್ನೆಲ್ಲ ಕಸಿದುಕೊಂಡಳು. ಅವಮಾನಿತಳಾದ ಗಂಗೆಯ ಕಣ್ಣುಗಳು ಹನಿಯಾದವು. ಅವಳ ಕಂಬನಿ ಧರೆಯ ಮೇಲೆ ಬಿದ್ದೊಡನೆ ಅದರಿಂದ ಬಳೆ, ಹೂವು, ಗಂಧ, ಚಂದ್ರ, ಅರಿಶಿನ, ಕುಂಕುಮ, ಹವಳ ಮುಂತಾದ ಮಂಗಳದ್ರವ್ಯಗಳನ್ನು ಹಿಡಿದುಕೊಂಡ ವ್ಯಕ್ತಿಯೊಬ್ಬ ಮೇಲೆದ್ದು ಬಂದ. ಅವನ ವಂಶಜರೇ ತಾವೆಂದೂ ಗಂಗೆಯೇ ಕುಲದೈವವೆಂದೂ ಮೂರು ಉಪಜಾತಿಯವರೂ ಹೇಳಿಕೊಳ್ಳುತ್ತಾರೆ. ಗಂಗೆ ಇವರ ಕುಲದೇವತೆಯಾಗಿದ್ದರಿಂದಲೇ ಗೌರಿಗಿಂತಲೂ ಗಂಗೆ ಪರಮಶ್ರೇಷ್ಠಳು ಎಂದು ಸಾಧಿಸಿ ತೋರಿಸುವ ಗಂಗೆ ಗೌರಿ ಜಗಳ ಎಂಬ ಕಾವ್ಯ ಈ ಮೂವರು ಗಾಯಕರಲ್ಲೂ ಬೆಳೆದುಬಂದಿದೆ. ಗೌರೀಪುತ್ರರಂತೆ ಗಂಗಾಪುತ್ರರು ಶ್ರೀಮಂತರಲ್ಲವಾದ್ದರಿಂದ ಅಲೆಮಾರಿಗಳಂತೆ ಭಿಕ್ಷಾಟನೆಯಿಂದ ಜೀವನ ಸಾಗಿಸುತ್ತಾರೆ. 
(ನೋಡಿ- ಗಂಗೆ---ಗೌರಿ)

	ಗಾಯಕ ವೆಂಕಟಪ್ಪನ ಪ್ರಕಾರ ತೆಲುಗು ಜಂಗಮರು, ತೆಲುಗು ಬಣಜಿಗರು ಹಾಗೂ ದೊಂಬಿದಾಸರು ಮೂಲದಲ್ಲಿ ಒಂದೇ ಆಗಿದ್ದರು. ಇವರಲ್ಲಿ ನಾಟಕ ಮಾಡುತ್ತಿದ್ದವರನ್ನು ದೊಂಬಿದಾಸರೆಂದು ಕರೆದರು. ವೀರಶೈವ ಗುರುಗಳಿಂದ ದೀಕ್ಷೆ ಪಡೆದವರನ್ನು ಜಂಗಮರೆಂದು ಕರೆದರು ಜೀವನ ಸಾಗಿಸಲು ಬಳೆ ಮುಂತಾದ ಮಂಗಳದ್ರವ್ಯಗಳನ್ನು ಮಾರುತ್ತಿದ್ದವರನ್ನು ಬಣಜಿಗರೆಂದು ಕರೆದರು, ಈಗ್ಗೆ ಕೆಲವು ವರ್ಷಗಳ ಹಿಂದೆ ದೊಂಬಿದಾಸರಾಗಿದ್ದವರು ಈಗ ಶ್ರೀಮಂತರಾಗಿ ತಮ್ಮನ್ನು ತೆಲುಗು ಬಣಜಿಗರೆಂದು ಹೇಳಿಕೊಳ್ಳುತ್ತಿರುವವರ ವಿವರಗಳು ಸಿಗುತ್ತವೆ. ತೆಲುಗು ಬಣಜಿಗರ ಬಗ್ಗೆ ಇಂಥ ಗೊಂದಲಗಳಿರುವುದರಿಂದ ಅವರನ್ನು ಶುದ್ಧವಾಗಿ ಗುರುತಿಸುವುದು ಕಷ್ಟಸಾಧ್ಯವಾಗಿದೆ. ಇವರು ಕೆಲವೊಮ್ಮೆ ಜೀವನ ನಿರ್ವಹಣೆಗಾಗಿ ಬಳೆ ಮಾರಿದರೂ ತಮ್ಮನ್ನು ಗಾಜುಲ ಬಣಜಿಗ ಅಥವಾ ಸೆಟ್ಟಿ ಬಣಜಿಗ ಎಂದು ಹೇಳಿಕೊಳ್ಳುವುದಿಲ್ಲ. ತಮ್ಮನ್ನು ತೆಲುಗು ಬಣಜಿಗರೆಂದೇ ಹೇಳಿಕೊಳ್ಳುತ್ತಾರೆ.    

	ಇವರ ಕುಲದೇವತೆ ಗಂಗೆಯಾದ್ದರಿಂದ ಎಲಹಂಕದ ಗಂಗಾಧರ ಸ್ವಾಮಿಯನ್ನು ಆರಾಧಿಸಿದರೂ ಇವರು ವೈಷ್ಣವ ಧರ್ಮಾನುಯಾಯಿಗಳು. ತಿರುಪತಿ ವೆಂಕಟರಮಣಸ್ವಾಮಿ ಹಾಗೂ ಕಂಚಿ ವರದರಾಜಸ್ವಾಮಿಯನ್ನು ಮನೆದೇವರಾಗಿ ಪೂಜಿಸುತ್ತಾರೆ. ಇವುಗಳ ಜೊತೆಗೆ ಮಾರಮ್ಮ, ಊರಮ್ಮ, ಮುಳ್ಳಟ್ಟಮ್ಮ, ಮುಂತಾದ ಜನಪದ ದೇವತೆಗಳಿಗೂ ನಡೆದುಕೊಳ್ಳುತ್ತಾರೆ. ಪ್ರಾಣಿಬಲಿಗಳಿಂದ ಈ ದೇವತೆಗಳನ್ನು ತೃಪ್ತಿಪಡಿಸಿ ಅವುಗಳ ಮಾಂಸವನ್ನು ತಾವೂ ಸೇವಿಸುತ್ತಾರೆ. ಇವರ ಗುರುಗಳು ಕಂಚಿಯಲ್ಲಿರುವುದಾಗಿ ಹೇಳುತ್ತಾರೆ. ಕಂಚಿಯಲ್ಲಿರುವ ಇವರ ಗುರುಪೀಠದ ಆದಿಗುರು ತಾತಾಚಾರ್ಯರು ಎಂಬುದಾಗಿ ತಿಳಿದುಬರುತ್ತದೆ. ಈ ವಿಷಯವನ್ನು ದಿ ಮೈಸೂರು ಟ್ರೈಬ್ಸ್ ಅಂಡ್ ಕ್ಯಾಸ್ಟ್ಸ್ ಗ್ರಂಥದಲ್ಲೂ ಹೇಳಿದೆ. ಈ ಜನಾಂಗವಿರುವ ನೆಲೆಗಳಿಗೆ ಪ್ರತಿವರ್ಷವೂ ಇವರ ಗುರುಗಳು ಬಂದು ಕಾಣಿಕೆಗಳನ್ನು ಸ್ವೀಕರಿಸುತ್ತಾರೆ.    

	ಬಯಲುಸೀಮೆಯ ಒಕ್ಕಲು ಮಕ್ಕಳ ಜೀವನಕ್ರಮಕ್ಕೆ ಒಗ್ಗಿಹೋಗಿರುವ ಇವರು ಹಬ್ಬಹರಿದಿನಗಳಲ್ಲೂ ಅವರನ್ನೇ ಅನುಸರಿಸಿದಂತೆ ಕಾಣುತ್ತದೆ. ಆದರೆ ಶ್ರಾವಣಮಾಸದಲ್ಲಿ ವಾರ, ಉಪವಾಸ, ವಿಶೇಷ ಪೂಜೆಗಳಿಂದ ವೆಂಕಟರಮಣ ಸ್ವಾಮಿಯನ್ನು ಪ್ರಸನ್ನಗೊಳಿಸಿಕೊಳ್ಳುತ್ತಾರೆ.    

	ಈಗ ಈ ಜನಾಂಗದಲ್ಲಿ ಪ್ರಚಲಿತವಿರುವ ಕೆಲವು ಪದ್ಧತಿ ಆಚಾರ ವಿಚಾರಾದಿಗಳನ್ನು ನೋಡಬಹುದು. ಹೆಣ್ಣುಮಕ್ಕಳು ಋತುಮತಿಯಾದಾಗ ಸೋದರಮಾವ ಅತ್ತಿಮರದ ಸೊಪ್ಪು, ಆಲದ ಮರದ ಸೊಪ್ಪು, ಬಸರಿಮರದ ಸೊಪ್ಪುಗಳನ್ನು ತಂದು ಗುಡಿಸಲು ಕಟ್ಟುತ್ತಾನೆ. ಮೂರು ದಿನಗಳವರೆಗೂ ಹೆಣ್ಣುಮಗಳು ಈ ಗುಡಿಸಿಲಿನಲ್ಲಿರುತ್ತಾಳೆ. ನಾಲ್ಕನೆಯ ದಿನ ಮಡಿವಾಳನನ್ನು ಕರೆಸಿ ಅಕ್ಕಿ, ಬೇಳೆ, ಬೆಲ್ಲ, ಎಲೆ, ಅಡಿಕೆಗಳನ್ನು ಅವನ ಮಡಿಲಿಗಿಟ್ಟು ಅವಳ ಬಟ್ಟೆಗಳನ್ನು ತೊಳೆಸುತ್ತಾರೆ. ಅನಂತರ ಅವಳಿಗೆ ಸ್ನಾನ ಮಾಡಿಸಿ ಹೊಸ ಸೀರೆ, ಹೊಸ ಕುಪ್ಪಸ, ಆಭರಣಾದಿಗಳಿಂದ ಅಲಂಕಾರ ಮಾಡಿ ಹಸೆ ಕೂರಿಸುತ್ತಾರೆ. ಆಗ ದಾಸಪ್ಪ ಬಂದು ಹರಿಗೆ ಮಾಜಿ ಶಂಖ ಊದಿ ಜಾಗಟೆ ಬಾರಿಸುತ್ತಾನೆ. ಹನ್ನೊಂದನೆಯ ದಿನ ಒಸಗೆ. ಆ ದಿನವೇ ಹುಡುಗಿಗೆ ಗಂಡು ಗೊತ್ತಾಗಿ ಮದುವೆಗೆ ಏರ್ಪಾಡು ಮಾಡಲು ನಿರ್ಧರಿಸುತ್ತಾರೆ. ಆ ದಿನ ಹುಡುಗಿಯಿಂದ ಗಂಗೆ ಪೂಜೆಯನ್ನು ಮಾಡಿಸುತ್ತಾರೆ.    

	ಗಂಡಿನ ಕಡೆಯವರು ಎಲೆ, ಅಡಿಕೆ, ಹೂವು, ಅರಿಸಿನ, ಕುಂಕುಮ, ಅಂಗನೂಲು ಕರಿಮಣಿ, ಬಿಚ್ಚೋಲೆ, ಸೀರೆ, ಖಣ, ಒಂದು ಹಣ- ಇಷ್ಟೆಲ್ಲ ವಸ್ತುಗಳನ್ನು ಐದು ಜನ ಮುತ್ತೈದೆಯರೊಡನೆ ತರುತ್ತಾರೆ. ಅವನ್ನೆಲ್ಲ ಹೆಣ್ಣಿನ ತಂದೆತಾಯಿಗಳ ಕೈಗಿಟ್ಟು ನಿಮ್ಮ ಒಡವೆ ನಮ್ಮದು ನಮ್ಮ ಒಡವೆ ನಿಮ್ಮದು ಎಂದು ಹೇಳಿ ಸೀಯೂಟ ಮಾಡಿ ಜೋಯಿಸರಿಂದ ಲಗ್ನ ಕಟ್ಟಿಸುತ್ತಾರೆ. ನಾಳೆ ಮದುವೆ ಎನ್ನುವಾಗ ಗಂಡಿನ ಮನೆಯಲ್ಲಿ ಕಂಬಿಶಾಸ್ತ್ರ ನಡೆಯುತ್ತದೆ. ಗಂಗೆಯನ್ನು ತಂದು ಕುಂಭಶಾಸ್ತ್ರ ಎಂಬ ಹೆಸರಿನಿಂದಲೂ ಪೂಜಿಸುತ್ತಾರೆ. ಒಂದು ಕಳಸವನ್ನು ಇಟ್ಟು ವೆಂಕಟರಮಣಸ್ವಾಮಿಯ ಹೆಸರಿನಲ್ಲಿ ಪೂಜಿಸುತ್ತಾರೆ. ಇದಾದ ಮೇಲೆ ಮಾಂಗಲ್ಯ, ಕರಿಮಣಿ, ಬಿಚ್ಚೋಲೆ, ಒಡವೆ ವಸ್ತ್ರಗಳೊಡನೆ ಹೆಣ್ಣಿನ ಮನೆಗೆ ಬರುತ್ತಾರೆ. ಗಂಡು ಊರದೇವಸ್ಥಾನದಲ್ಲಿ ಇಳಿದುಕೊಳ್ಳುತ್ತದೆ. ಹೆಣ್ಣಿನವರು ವೆಂಕಟರಮಣಸ್ವಾಮಿ ಕಳಸದೊಡನೆ ಹೋಗಿ ಹೆಣ್ಣಿನ ಮನೆಯವರೊಡನೆ ಮನೆದುಂಬಿಸಿಕೊಳ್ಳುವ ಶಾಸ್ತ್ರ ನಡೆಸುತ್ತಾರೆ. ಗಂಡನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬಂದು ಧಾರೆಗೆ ನಿಲ್ಲಿಸುತ್ತಾರೆ. ಈ ಜನಾಂಗದ ಮುಖ್ಯಸ್ಥನೇ ಪೌರೋಹಿತ್ಯವನ್ನು ವಹಿಸುತ್ತಾನೆ. ಮಾಂಗಲ್ಯಧಾರಣೆಯಾದ ಮೇಲೆ ಹೆಣ್ಣುಗಂಡುಗಳನ್ನು ಹಸೆ ಕೂರಿಸುತ್ತಾರೆ. ಹೆಂಗಸರು :
  
ಅಮ್ಮ ಗೌರಮ್ಮಕಿ
ಬೆಮ್ಮ ಗಂಗಮ್ಮಕಿ
ಮೂಲಲೋ ಉಂಡೇಟಿ
ಮುತ್ಯಾಲ ಅರವೇಣಿಕಿ
ಈ ದಿಲೋ ಉಂಟೇಡಿ
ಮುದ್ದುಪೆಂಡ್ಲಿಕೊಡುಕಿಕಿ
ಮುದ್ದುಪೆಂಡ್ಲಿ ಕೂತುರುಂಕಿ
ಕಂಚಿ ಕಾಮಾಚಮ್ಮಕಿ
ಎತ್ತಂಡಿ ಆರತಿ ಮಂಗಳಂ

ಮುಂತಾಗಿ ಮಂಗಳಗೀತೆಗಳನ್ನು ಹಾಡುತ್ತಾರೆ. ಅನಂತರ ಪುರೋಹಿತ ಹೆಣ್ಣು ಗಂಡುಗಳನ್ನು ಚಪ್ಪರದಿಂದ ಹೊರಕ್ಕೆ ಕರತಂದು ಅರುಂಧತಿ ನಕ್ಷತ್ರ ತೋರಿಸಿ :  

ಪನ್ನೆಂದು ಕಂಬಾಲು ಚೂಸ್ತ್ರ ?
   ಚೂಸ್ತೆ.
ಪನ್ನೆಂಡು ಗುಂಬಾಲು ಚೂಸ್ತ್ರ?
   ಚೂಸ್ತೆ .
ವೆಂಕಟಚಲ ಸ್ವಾಮಿ ಚೂಸ್ತ್ರ?
   ಚೂಸ್ತೆ. 
ಗಂಗಾಭವಾನಿನು ಚೂಸ್ತ್ರ?
   ಚೂಸ್ತೆ.
ಸೂರ್ಯನ ಚೂಸ್ತ್ರ?
   ಚೂಸ್ತೆ. 
ಚಂದ್ರನ ಚೂಸ್ತ್ರ?
   ಚೂಸ್ತೆ. 
ಮುತ್ಯಾಲು ಚೂಸ್ತ್ರ?
   ಚೂಸ್ತೆ.
ಮುತ್ತಾಲಟ್ಲ ಪೆಂಡ್ಲಾನೆ ಚೂಸ್ತ್ರ?
   ಚೂಸ್ತೆ. 
ಮುತ್ತಾಲಟ್ಲ ಮಗುಡ್ನೆ ಚೂಸ್ತ್ರ?
   ಚೂಸ್ತೆ.     

ಎಂಬುದಾಗಿ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಪಡೆಯುತ್ತಾನೆ. ಅನಂತರ ವಾದ್ಯಸಮೇತ ಹೆಣ್ಣುಗಂಡುಗಳು ಅರಳಿಕಟ್ಟೆ ಪೂಜೆ ಮಾಡಿ ಬರುತ್ತಾರೆ. ಓಕಳಿ ಶಾಸ್ತ್ರವೂ ನಡೆಯುತ್ತದೆ. ಕರನೆರೆ ಊಟಕ್ಕೆ ಒಕ್ಕಲಿಗರಂತೆ ಮರಿಯೂಟದ ಏರ್ಪಾಡು ಮಾಡುತ್ತಾರೆ.   

	ಬಸುರಿಯಾದ ಹೆಣ್ಣುಮಗಳನ್ನು 5 ಅಥವಾ 7 ತಿಂಗಳಿಗೆ, ಎಲೆ, ಅಡಿಕೆ, ಕಾಯಿ, ಹಣ್ಣು ಹೂವು ಬೆಲ್ಲದಚ್ಚುಗಳನ್ನೆಲ್ಲ ಮಡಿಲುದುಂಬಿ ಆರತಿ ಬೆಳಗಿ, ತಾಯಿಯ ಮನೆಗೆ ಕಳಿಸಿಕೊಡುತ್ತಾರೆ. ಮಗಳು ಬರುವ ಹೊತ್ತಿಗೆ ತಾಯಿಯ ಮನೆಯಲ್ಲಿ ಕೈಯೆಣ್ಣೆದೀಪವನ್ನು ದೇವರಮುಂದೆ ಹಚ್ಚಿಟ್ಟಿರುತ್ತಾರೆ. ಬಂದ ಮಗಳನ್ನು ಬಾಗಿಲ ಬಳಿ ಕುಳ್ಳಿರಿಸಿ ಗಂಗೋದಕವನ್ನು ಅವಳ ತಲೆಮೇಲೆ ಚಿಮುಕಿಸಿ ಆರತಿ ಬೆಳಗಿ ಶುಭ ಶುಭಾ ಎಂದು ಹೇಳಿ ಬಲಗಾಲಿಡಿಸಿ ಒಳಕ್ಕೆ ಕರೆದುಕೊಳ್ಳುತ್ತಾರೆ. ಹೆರಿಗೆಯ ಸಮಯದಲ್ಲಿ ಗಂಡಸರೊಬ್ಬರು ಒಂದು ಕೋಳಿಮೊಟ್ಟೆ ನಿಂಬೆಹಣ್ಣು, ಸಣ್ಣದೊಂದು ಹೊಸ ಕುಡಿಕೆ ಮತ್ತು ಪೂಜಾಸಾಮಾಗ್ರಿಗಳೊಡನೆ ಗಂಗೆ ತಡಿಗೆ ಹೋಗಿ ಅವನ್ನು ಒಂದರ ಮೇಲೊಂದನ್ನು ಜೋಡಿಸಿಟ್ಟು ಪೂಜೆ ಮಾಡಿ ದೊಣ್ಣೆಯಿಂದ ಅದಕ್ಕೆ ಅಪ್ಪಳಿಸುತ್ತಾರೆ. ಅವೆಲ್ಲ ಒಂದೇ ಏಟಿಗೆ ಒಡೆದರೆ ಹೆರಿಗೆ ಸುಖ ಪ್ರದವಾಗಿರುತ್ತದೆಯೆಂದು ನಂಬುತ್ತಾರೆ. ಹೀಗೆ ಒಡೆದ ವಸ್ತುಗಳನ್ನು ಒಗೆಯುವ ಕಲ್ಲಿನ ತಳಕ್ಕೆ ಮುಚ್ಚಿ ತಿರುಗಿ ನೋಡದೆ ಬರುತ್ತಾರೆ. ಹೆರಿಗೆಯಾದ ಮೂರು ದಿನಗಳ ತನಕ ಸೂತಕ. ನಾಲ್ಕನೆಯ ದಿನ ದಾಸಪ್ಪನನ್ನು ಕರೆಸಿ, ಮನೆಮಠವನ್ನೆಲ್ಲ ಸಾರಿಸಿ ಗುಡಿಸಿ ಹರಿಗೆ ಪೂಜೆ ಮಾಡಿಸಿ, ಶಂಖ ಊದಿಸಿ ಜಗಟೆ ಹೊಡೆಸುತ್ತಾರೆ. ದಾಸಪ್ಪನೇ ಮಗುವಿನ ಹೆಸರುಬಲಕ್ಕೆ ಬಂದ ಹೆಸರನ್ನು ಕಟ್ಟುತ್ತಾನೆ. ಇವರಲ್ಲಿ ಶವಸಂಸ್ಕಾರ ತಿಥಿ ಮುಂತಾದ ಆಚರಣೆಗಳು ತೆಲುಗು ಜಂಗಮರ ಹಾಗೂ ಒಕ್ಕಲಿಗರ ಆಚರಣೆಗಳನ್ನೇ ಹೋಲುತ್ತವೆ.      
                              (ಪಿ.ಕೆ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ